ಯು.ಆರ್.ಅನಂತಮೂರ್ತಿ 
ಯು.ಆರ್.ಅನಂತಮೂರ್ತಿ                       (ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ) ಯವರು ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಮಗನಾಗಿ 1932ರ ಡಿಸೆಂಬರ್ 21ರಂದು ಶಿವಮೊಗ್ಗ ಜಿಲ್ಲೆಯ ಮೋಳಿಗೆಯಲ್ಲಿ ಜನಿಸಿದರು. ಬಾಲಕ ಅನಂತಮೂರ್ತಿಯ ಪ್ರಾಥಮಿಕ ವಿದ್ಯಾಭ್ಯಾಸ ಮೇಳಿಗೆ, ಬೇಗವಳ್ಳಿ, ಕೋಣಂದೂರು, ತೀರ್ಥಹಳ್ಳಿ ಪ್ರಾಥಮಿಕ ಶಾಲೆಗಳಲ್ಲಿ ನಡೆಯಿತು. ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದ ಅನಂತಮೂರ್ತಿ ತನ್ನ ಅಗ್ರಹಾರದ ಗೆಳೆಯರೊಂದಿಗೆ ತರಂಗಿಣಿ ಎಂಬ ಕೈಬರಹದ ಪತ್ರಿಕೆಯೊಂದನ್ನು ಆರಂಭಿಸಿದ್ದರು. ಈ ಪತ್ರಿಕೆಯಲ್ಲಿ ಅನಂತಮೂರ್ತಿಯವರ ಆರಂಭದ ಕತೆಯೊಂದು ಪ್ರಕಟವಾಯಿತು. 
ಅನಂತಮೂರ್ತಿಯವರು ಲೋಯರ್ ಸೆಕೆಂಡರಿ ಹಾಗೂ ಎಸ್.ಎಸ್.ಎಲ್.ಸಿ.ಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಎಸ್.ಎಸ್.ಎಲ್.ಸಿ. ಗಣಿತದಲ್ಲಿ ಅವರಿಗೆ ನೂರಕ್ಕೆ ನೂರು ಅಂಕಗಳು ಸಿಕ್ಕಿದವು. ಶಿವಮೊಗ್ಗದ ಸರಕಾರಿ ಇಂಟರ್‍ಮೀಡಿಯೇಟ್ ಕಾಲೇಜಿನಲ್ಲಿ ಇಂಟರ್ (ಪಿಯು.ಸಿ) ಓದುತ್ತಿದ್ದಾಗ ಕಾಗೋಡು ಸತ್ಯಾಗ್ರಹ - ರೈತರ ಹೋರಾಟ (1950-51) ಹದಿಹರೆಯದ ಅನಂತಮೂರ್ತಿಯವರ ಮೇಲೆ  ಪ್ರಭಾವ ಬೀರಿತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ (ಆನರ್ಸ್) ಓದುತ್ತಿದ್ದಾಗ ಸಿ.ಡಿ. ನರಸಿಂಹಯ್ಯ, ಎಂ.ಎನ್.ಪಾರ್ಥಸಾರಥಿ, ಎಸ್.ವಿ.ರಂಗಣ್ಣ-ಅನಂತಮೂರ್ತಿಯವರ ಗುರುಗಳಾಗಿದ್ದರು. (1950-54) ಶಿವಮೊಗ್ಗದಲ್ಲಿ 1954-55ರಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ  ಇಂಗ್ಲಿಷ್ ಎಂ.ಎ. ವಿಧ್ಯಾರ್ಥಿಯಾಗಿದ್ದಾಗ ಪ್ರೊ.ಸಿ.ಡಿ.ನರಸಿಂಹಯ್ಯ ಹಾಗೂ ಎಂ.ರಾಮರಾವ್ ಇವರ ಗುರುಗಳು.
ಇಂಟರ್ ವಿದ್ಯಾರ್ಥಿಯಾಗಿದ್ದಾಗ ಶಿವಮೊಗ್ಗದ ಮಿತ್ರ ಪತ್ರಿಕೆಯಲ್ಲಿ ಅನಂತಮೂರ್ತಿಯವರ ಕೆಲವು ಕವನಗಳು, ಕತೆಗಳು ಪ್ರಕಟವಾಗಿದ್ದುವು. ಬಿ.ಎ. ಕಲಿಕೆಗಾಗಿ ಮೈಸೂರಿಗೆ ಬಂದ ಮೇಲೆ `ಚಿತ್ರಗುಪ್ತ, `ಜನಪ್ರಗತಿ' ಪತ್ರಿಕೆಗಳಿಗಾಗಿ ಅವರು ಕೆಲವು ಕತೆಗಳನ್ನು ಬರೆದರು. `ಕೈ ತಪ್ಪಿತು ಎಂಬ ಅನಂತಮೂರ್ತಿಯವರ ಕತೆಯನ್ನು ನಿರಂಜನ ತಮ್ಮ ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದರು. ಅನಂತಮೂರ್ತಿಯವರ ಮೊದಲ ಕಥಾಸಂಕಲನ `ಎಂದೆಂದೂ ಮುಗಿಯದ ಕಥೆ, ಗೋಪಾಲಕೃಷ್ಣ ಅಡಿಗರ ಮುನ್ನುಡಿಯೊಂದಿಗೆ 1955ರಲ್ಲಿ ಪ್ರಕಟವಾಯಿತು. ಹೆಗ್ಗೋಡಿನ `ಅಕ್ಷರ ಪ್ರಕಾಶನ ಅನಂತಮೂರ್ತಿಯವರ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದೆ.

1956ರಲ್ಲಿ ಹಾಸನದ ಸರಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇರಿದ ಅನಂತಮೂರ್ತಿ, ತಮ್ಮ ವೃತ್ತಿಜೀವನದಲ್ಲಿ ಆರೋಹಣದ ಮೆಟ್ಟಿಲುಗಳನ್ನು ಏರುತ್ತಾ ಹೊದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ (1957-1963). ಕಾಮನ್‍ವೆಲ್ತ್ ಫೆಲೋಶಿಪ್ ಪಡೆದು ಇಂಗ್ಲೆಂಡಿನ ಬರ್ಮಿಂಗಂ ವಿಶ್ವವಿದ್ಯಾನಿಲಯದಿಂದ ಪಿ.ಎಚ್‍ಡಿ. ಸಂಶೋಧನೆ(1963-1966) ಮೈಸೂರಿನ ರೀಜಿನಲ್ ಆಫ್ ಎಜುಕೇಶನ್‍ನಲ್ಲಿ ರೀಡರ್(1967-1970). ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ರೀಡರ್(1970-1980). ಸೃಜನಶೀಲ ಬರವವಣಿಗೆಗಾಗಿ ಹೋಮಿ ಭಾಭಾ ಫೆಲೋಶಿಪ್ ಪಡೆದು `ಭಾರತೀಪುರ ಕಾದಂಬರಿ ಬರೆದರು(1972-1974). ಅಮೆರಿಕದ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಲೇಖಕ(1975). ಟಫ್ಟ್ಯ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ (1980-1987). ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕ(1980) ಅಯೋವಾ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ `ಇಡಾಬೀಮ್ ಪ್ರೊಫೆಸರ್(1985). ಅಯೋವಾ ವಿಶ್ವವಿದ್ಯಾನಿಲಯದ ಏಷ್ಯನ್ ಭಾಷೆಗಳ ವಿಭಾಗದಲ್ಲಿ ಫುಲ್ ಬ್ರೈಟ್ ಪ್ರೊಫೆಸರ್(1986-1987) ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಕುಲಪತಿ(1987-1991). ನವದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್‍ನ ಅಧ್ಯಕ್ಷ(1992-1993). ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕ(1993). ಆಸ್ಟಿನ್ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಲೇಖಕ(1995). ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯ ಮಾನವಿಕ ವಿಭಾಗದ ಗೌರವ ನಿರ್ದೇಶಕ(1995-1998). ದೆಹಲಿಯ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‍ನ ಅಧ್ಯಕ್ಷ(1998).
ಅನಂತಮೂರ್ತಿ-ಎಸ್ತರ್ ಅವರ ಮದುವೆ 1961ರಲ್ಲಿ ಮೈಸೂರಿನಲ್ಲಿ ನಡೆಯಿತು. ಎಸ್ತರ್-ಅನಂತಮೂರ್ತಿ ದಂಪತಿಗಳ ಇಬ್ಬರು ಮಕ್ಕಳು-ಶರತ್ ಅನಂತಮೂರ್ತಿ ಮತ್ತು ಅನುರಾಧಾ. ಅನಂತಮೂರ್ತಿಯವರ ಅಳಿಯ ವಿವೇಕ್ ಶ್ಯಾನಭಾಗ್ ಕನ್ನಡದ ಸಣ್ಣ ಕತೆಗಾರರಾಗಿ ಪ್ರಸಿದ್ಧರು. ಇಂಗ್ಲೆಂಡಿನ ಬರ್ಮಿಂಗ್‍ಗ್ಯಾಂನಲ್ಲಿ(1963-1966) ಪಿ.ಎಚ್‍ಡಿ. ಸಂಪ್ರಬಂಧ ಬರೆಯಲು ಆರಿಸಿಕೊಂಡ ವಿಷಯ-"1930ರ ದಶಕದ ರಾಜಕೀಯ ಮತ್ತು ಇಂಗ್ಲಿಷ್ ಕಾದಂಬರಿ". ಅನಂತಮೂರ್ತಿಯವರ ಸಂಪಾದಕತ್ವದಲ್ಲಿ `ರುಜುವಾತು ತ್ರೈಮಾಸಿಕ ಪತ್ರಿಕೆ ಆರಂಭವಾದದ್ದು 1981ರಲ್ಲಿ. ಶಿವರಾಮ ಕಾರಂತರಂತೆ ಅನಂತಮೂರ್ತಿಯವರೂ ನಿತ್ಯಸಂಚಾರಿ, ವಿಶ್ವಸಂಚಾರಿ ಲೇಖಕ. ಭಾರತದ ನೂರಾರು ಊರುಗಳಲ್ಲಿ ಮಾತ್ರವಲ್ಲದೆ, ಜಗತ್ತಿನ ಹತ್ತು-ಹಲವು ದೇಶಗಳಲ್ಲಿ ಅವರು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
ಕನ್ನಡದ ಪ್ರಸಿದ್ಧ ಕವಿ, ಜಾನಪದತಜ್ಞ ಎ.ಕೆ. ರಾಮಾನುಜನ್ ಇಂಗ್ಲೀಷಿಗೆ ಭಾಷಾಂತರಿಸಿದ ಅನಂತಮೂರ್ತಿಯವರ `ಸಂಸ್ಕಾರ ಕಾದಂಬರಿಯನ್ನು 1976ರಲ್ಲಿ ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿತು. `ಅವಸ್ಥೆಯನ್ನು ಕನ್ನಡ ಕಾದಂಬರಿಕಾರ ಶಾಂತಿನಾಥ ದೇಸಾಯಿ ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. (ಎಲೈಡ್ ಪಬ್ಲಿಶರ್ಸ್- 1986) ಪಿ. ಶ್ರೀನಿವಾಸರಾವ್ ಅವರು ಇಂಗ್ಲೀಷಿಗೆ ಭಾಷಾಂತರಿಸಿದ `ಭಾರತೀಪುರ"ವನ್ನು ಮ್ಯಾಕ್‍ಮಿಲನ್ ಇಂಡಿಯಾ 1996ರಲ್ಲಿ ಪ್ರಕಟಿಸಿತು. `ಭವವನ್ನು ಜುಡಿತ್ ಕ್ರೋಲ್ ಮತ್ತು ಅನಂತಮೂರ್ತಿ ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. (ಪೆಂಗ್ವಿನ್ ಇಂಡಿಯ-1998). `ಸಂಸ್ಕಾರ ರಶಿಯನ್, ಫ್ರೆಂಚ್, ಹಂಗೇರಿಯನ್, ಜರ್ಮನ್, ಹಿಂದಿ, ಬಂಗಾಳಿ, ಮಲಯಾಳಮ್, ಮರಾಠಿ, ಉರ್ದು ಮತ್ತು ಗುಜರಾತಿ ಭಾಷೆಗಳಿಗೂ ಭಾಷಾಂತರಗೊಂಡಿದೆ.

ಪಟ್ಟಾಭಿರಾಮರೆಡ್ಡಿಯವರು ನಿರ್ದೇಶಿಸಿದ `ಸಂಸ್ಕಾರ(1970) ಚಲನಚಿತ್ರ ರಾಷ್ಟ್ರಪತಿಯವರ ಸುವರ್ಣಪದಕವನ್ನು, ಬ್ರಾಂಡ್‍ಲಿಯೋ ವಾರ್ಡ್ ಮತ್ತಿತರ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆಯಿತು. ಗಿರೀಶ್ ಕಾರ್ನಾಡರು ಈ ಸಿನಿಮಾದ ಸಂಭಾಷಣೆ ಬರೆದಿದ್ದಾರೆ. ಅನಂತಮೂರ್ತಿ ಅವರ `ಅವಸ್ಥೆ ಕಾದಂಬರಿ ಆಧಾರಿತ ಚಲನಚಿತ್ರವನ್ನು ಕೃಷ್ಣ ಮಾಸಡಿ 1987ರಲ್ಲಿ ನಿದೇರ್ಶಿಸಿದರು. ಗಿರೀಶ್ ಕಾಸರವಳ್ಳಿಯವರು ಅನಂತಮೂರ್ತಿಯವರ `ಘಟಶ್ರಾದ್ಧ ಸಣ್ಣಕತೆ ಆಧರಿಸಿ ನಿರ್ದೇಶಿಸಿದ ಚಲನಲಚಿತ್ರ ರಾಷ್ಟ್ರಪತಿಯವರ ಸುವರ್ಣಪದಕ ಪಡೆಯಿತು(1978). ಕೆ.ವಿ. ಸುಬ್ಬಣ್ಣ ಈ ಚಲನಚಿತ್ರದ ಸಂಭಾಷಣೆ ಬರೆದಿದ್ದಾರೆ. ಸಂಗೀತ ಬಿ.ವಿ. ಕಾರಂತ, ಛಾಯಾಗ್ರಹಣ-ರಾಮಚಂದ್ರ. ಎಂ.ಎಸ್. ದತ್ತು ಅವರು ಅನಂತಮೂರ್ತಿಯವರ `ಬರ ಕಥೆಯನ್ನು ಆಧರಿಸಿ ನಿರ್ದೇಶಿಸಿರುವ ಚಲನಚಿತ್ರ(1982) ಕನ್ನಡ ಹಾಗೂ ಹಿಂದಿ (ಸೂಖಾ) ಎರಡೂ ಭಾಷೆಗಳಲ್ಲಿ ಬಿಡುಗಡೆಗೊಂಡಿದೆ.
ಡಾ. ಯು.ಆರ್. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿಗಳು-ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಎಂ.ಎ. ಯಲ್ಲಿ ಸುವರ್ಣ ಪದಕ(1956). `ಸಂಸ್ಕಾರದ ಕತೆಗೆ ಕರ್ನಾಟಕ ಫಿಲ್ಮ್ ಡೆವೆಲಪ್‍ಮೆಂಟ್ ಕಾರ್ಪೋರೇಶನ್ನಿನ ಪ್ರಶಸ್ತಿ-1970. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1983. ಉಡುಪಿಯ ಆದಮಾರು ಮಠದ ವಿಬುಧೇಶತೀರ್ಥ ಸ್ವಾಮೀಜಿಯವರ `ಸಮಾಜಭೂಷಣ' ಪ್ರಶಸ್ತಿ-1988. `ಬರಕ್ಕೆ ಕರ್ನಾಟಕ ಫಿಲ್ಮ್ ಡೆವೆಲಪಮೆಂಟ್ ಕಾರ್ಪೋರೇಷನ್ನಿನ ಅತ್ಯುತ್ತಮ ಕಥೆ ಪ್ರಶಸ್ತಿ-1989. ಹಾರ್ಮೋನಿ ಅವಾರ್ಡ್ 1990. ಮಾಸ್ತಿ ಪ್ರಶಸ್ತಿ-1994. ಜ್ಞಾನಪೀಠ ಪ್ರಶಸ್ತಿ-1994. ಕಲ್ಕತ್ತದ ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪ್ರಶಸ್ತಿ-1995. ಹಿಮಾಚಲ ಪ್ರದೇಶ ಸರಕಾರದ ಶಿಖರ್ ಸನ್ಮಾನ್-1995. ಭಾರತ ಸರಕಾರದ ಪದ್ಮಭೂಷಣ ಪ್ರಶಸ್ತಿ-1998. ತುಮಕೂರಿನಲ್ಲಿ ನಡೆದ 69ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ-2002.

ಅನಂತಮೂರ್ತಿಯವರು ಪ್ರವಾಹದ ವಿರುದ್ಧ ಈಜುವ ಲೇಖಕ. ಸಮೂಹಸನ್ನಿಯಿಂದ ಅವರು ಯಾವಾಗಲೂ ದೂರ. ತನ್ನ ಲೇಖನ, ಭಾಷಾಂತರಗಳಿಂದ ಅವರು ಅನೇಕ ವಾಗ್ವಾದಗಳನ್ನು ಆರಂಭಿಸಿದ್ದಾರೆ. ತನ್ನ ವಾದಗಳು ವಿವಾದಗ್ರಸ್ತವಾದಾಗ ಅವರು ತನ್ನ ನಿಲುವುಗಳನ್ನು ಬದಲಾಯಿಸಿಲ್ಲ. ರಾಮಮನೋಹರ ಲೋಹಿಯಾ ಅವರ ವಿಚಾರಧಾರೆಯಿಂದ ಪ್ರಭಾವಿತರಾಗಿ ಬೆಳೆದು, ಗಾಂಧಿ ಮತ್ತು ಮಾಕ್ರ್ಸ್ ನಡುವಿನ ವೈಚಾರಿಕತೆಯಲ್ಲಿ ಗಾಂಧಿಯದೇ ಹೆಚ್ಚು ಸಾರ್ವತ್ರಿಕವೆಂದು ಅನಂತಮೂರ್ತಿ ನಂಬಿದ್ದಾರೆ. `ಸಾಹಿತ್ಯದಲ್ಲಿ ಬ್ರಾಹ್ಮಣ ಶೂದ್ರ(1967), `ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ(1965), `ಜಾತಿವಿಚಾರ(1973), `ದಲಿತರಲ್ಲಿ ಅರಿವಿನ ಸ್ಫೋಟ'(1979), `ಬೂಸಾಪ್ರಕರಣ'(1980) `ಬ್ರಾಹಣನಾಗಿ ನಾನು(1990) `ಮಾಧ್ಯಮ ಮತ್ತು ಸ್ವಾತಂತ್ರ್ಯ(1976-ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬರೆದ ಲೇಖನ), `ಈ ನಮ್ಮ ಸಂಸ್ಕøತಿ'(1983) `ತುಮಕೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ'(2002)-ಇವು ಅನಂತಮೂರ್ತಿಯವರ ವೈಚಾರಿಕ ನೆಲೆಯನ್ನು ಅರ್ಥಮಾಡಿಕೊಳ್ಳಲು ಮುಖ್ಯವಾಗುವ ಲೇಖನಗಳು.

ಮಾಸ್ತಿಯವರ ಅನಂತರ ಕನ್ನಡ ಸಣ್ಣಕತೆಯ ಸಾಧ್ಯತೆಯನ್ನು ವಿಸ್ತರಿಸಿದ ಅನಂತಮೂರ್ತಿ ಭಾರತೀಯ ನವ್ಯ ಪರಂಪರೆಯ ಮಹತ್ವದ ಕತೆಗಾರರು. `ಎಂದೆಂದೂ ಮುಗಿಯದ ಕತೆ(1955), `ಪ್ರಶ್ನೆ(1963), `ಮೌನಿ (1972), `ಆಕಾಶ ಮತ್ತು ಬೆಕ್ಕು(1981), ಸೂರ್ಯನ ಕುದುರೆ(1995) ಈ ಐದು ಕಥಾಸಂಕಲನಗಳಲ್ಲಿ ಒಟ್ಟು ಇಪ್ಪತ್ತಾರು ಕತೆಗಳಿವೆ. `ಘಟಶ್ರಾದ್ಧ `ಕಾರ್ತೀಕ `ನವಿಲುಗಳು `ಪ್ರಕೃತಿ', `ಮೌನಿ `ಕ್ಲಿಪ್ ಜಾಯಿಂಟ್ `ಸೂರ್ಯನ ಕುದುರೆ-ಇವು ವಿಮರ್ಶಕರು ಗುರುತಿಸಿ ಚರ್ಚಿಸಿರುವ ಮುಖ್ಯ ಕತೆಗಳು.

ಅನಂತಮೂರ್ತಿಯವರ `ಸಂಸ್ಕಾರ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ ಕಾದಂಬರಿ. `ಮಾನವಶಾಸ್ತ್ರೀಯ ಕಾದಂಬರಿ. ಒಬ್ಬ ಸುಸಂಸ್ಕøತ ವ್ಯಕ್ತಿಯ ಆಂತರಿಕ ಆಧ್ಯಾತ್ಮಿಕ ಧರ್ಮಸಂಕಟದ ಚಿತ್ರಣ, ಒಂದು ಜಾತಿ, ಧರ್ಮ, ಸಮಾಜದ ವಿಘಟನೆಯ ಕತೆ, ಹಿಂದೂ ಧರ್ಮದ ವಿಶ್ಲೇಷಣೆ, ಮಧ್ಯ ವಯಸ್ಸಿನ ಮನಸ್ಸಿನ ಕ್ಷೋಭೆಯ ಚಿತ್ರಣ-ಹೀಗೆ ವೈವಿಧ್ಯಪೂರ್ಣ ವಿಮರ್ಶೆ ವ್ಯಾಖ್ಯಾನಗಳನ್ನು ಈ ಕಾದಂಬರಿ ಪಡೆದಿದೆ. `ಸಂಸ್ಕಾರ ದ ಬಗ್ಗೆ ಬರೆದಿರುವ ಎಲ್ಲ ಮಹತ್ವದ ಚಿಂತಕರು-ಎರಿಕ್ ಎರಿಸನ್, ಮದನ್, ಮೀನಾಕ್ಷಿ ಮುಖರ್ಜಿ, ಹೈಡ್ರೂನ್ ಬ್ರೂಕ್ನರ್ ಎಲ್ಲರೂ-`ಸಂಸ್ಕಾರದ ನಾಯಕ ಪ್ರಾಣೇಶಾಚಾರ್ಯರು ಎದುರಿಸುವ ಬಿಕ್ಕಟ್ಟು ಯಾವುದೇ ಸಮಾಜದಲ್ಲಿ ಒಬ್ಬ ಸೂಕ್ಷ್ಮಜ್ಞನಿಗೆ ಎದುರಾಗುವಂಥದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
`ಭಾರತೀಪುರ 1973ರಲ್ಲಿ ಪ್ರಕಟವಾದ ಅನಂತಮೂರ್ತಿಯವರ ಕಾದಂಬರಿ. ಇದನ್ನು ವಿಮರ್ಶಕರು, `ನೆಹರೂ ಯುಗವನ್ನು ಪ್ರತಿನಿಧಿಸುವ ಕಾದಂಬರಿ, ಬುದ್ಧಿಜೀವಿ ಮಧ್ಯಮ ವರ್ಗದ ಮಿತಿಗಳ ವಿಮರ್ಶೆ, ಒಬ್ಬ ಭಾರತೀಯ ಸೋಜಲಿಸ್ಟ್ ಸಮಾಜ ಸುಧಾರಕನ ಸಮಾಜ ಸುಧಾರಣೆಯ ಕತೆ, ಆಧುನಿಕ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ತರುಣನೊಬ್ಬನ ತಲ್ಲಣಗಳ ಕತೆ, ಸಮಾಜ ಸುಧಾರಣೆಯ ವಿಫಲತೆಯ ಕತೆ, ಎಂದು ವಿಭಿನ್ನವಾಗಿ ವ್ಯಾಖ್ಯಾನಿಸಿದ್ದಾರೆ. 
	
ಅವಸ್ಥೆ 1978ರಲ್ಲಿ ಪ್ರಕಟವಾದ ಅನಂತಮೂರ್ತಿಯವರ ಮೊದಲನೆಯ ಕಾದಂಬರಿ. ಇದು ಒಂದು ಗಂಭೀರ ರಾಜಕೀಯ ಕಾದಂಬರಿ. ನಮ್ಮ ರಾಜಕೀಯ ಸಂಸ್ಕøತಿಯ ಇತಿಮಿತಿಗಳನ್ನು ತಳಮಟ್ಟ ಶೋಧಿಸುವ ಕೃತಿ, ಹಿಂದುಳಿದ ಜಾತಿಯಿಂದ ಮೇಲೆದ್ದು ಬಂದ ಉತ್ಸಾಹಿ ಪ್ರಾಮಾಣಿಕ ರಾಜಕೀಯ ನಾಯಕನೊಬ್ಬನು ಭ್ರಷ್ಟ ರಾಜಕಾರಣದ ಬಲೆಯಲ್ಲಿ ಸಿಲುಕಿ ಸೋಲುವ ಕಥೆ, ರೈತ ಚಳುವಳಿಯ ರಾಜಕಾರಣದ ಸೋಲಿನ ಕತೆ, ಅವಸ್ಥೆಯನ್ನು ಕುರಿತ ವಿಮರ್ಶೆಗಳ ಸಾರಾಂಶವಿದು. ಭವ (1994) ದಿವ್ಯ   (--), ಅನಂತಮೂರ್ತಿಯವರ ಇತ್ತೀಚಿಗಿನ ಕಾದಂಬರಿಗಳು. ಇವು ಮೊದಲ ಕಾದಂಬರಿ ತ್ರಿವಳಿಯಷ್ಟು ಮನ್ನಣೆಗಳಿಸಿಲ್ಲ.
	
1963ರಲ್ಲಿ ಪ್ರಕಟವಾದ ಅನಂತಮೂರ್ತಿಯವರ ಬಾವಲಿ ಕವನ ಸಂಕಲನದಲ್ಲಿ ಹತ್ತು ಕವನಗಳಿವೆ. ಇದು ಹೊಸ ಕವನಗಳೊಂದಿಗೆ ಈ ಸಂಕಲನದ ಪರಿವರ್ಥಿತ ಆವೃತ್ತಿ 1970ರಲ್ಲಿ 15 ಪದ್ಯಗಳು ಎಂಬ ಹೆಸರಿನಲ್ಲಿ ಪ್ರಕಟವಾಯಿತು. 1989ರಲ್ಲಿ ಪ್ರಕಟವಾದ ಅಜ್ಜನ ಹೆಗಲ ಸುಕ್ಕುಗಳು ಸಂಕಲನದಲ್ಲಿ ಮೂವತ್ತಾರು ಕವನಗಳಿವೆ. ನಲವತ್ತೆರೆಡು ಕವನಗಳಿರುವ ಮಿಥುನ ಸಂಕಲನ 1992ರಲ್ಲಿ ಪ್ರಕಟವಾಗಿದೆ. ನಾಲ್ಕು ಸಂಕಲನಗಳಲ್ಲಿ ಲಭ್ಯವಿರುವ ಅನಂತಮೂರ್ತಿಯವರ ಕವನಗಳ ಒಟ್ಟು ಸಂಖ್ಯೆ - ತೊಂಬತ್ತಮೂರು. “ಕವಿತೆ ನನ್ನ ಪಾಲಿಗೆ ಕೆಲವು ಕಾಲ ಹಿಡಿದಿಟ್ಟು, ಬಿಟ್ಟು ಮತ್ತೆ ಬರಬಹುದಾದ್ದು. ಐವತ್ತರ ದಶಕದಲ್ಲಿ ಕವಿತೆಯ ಗುಂಗಿನಲ್ಲಿದ್ದ ಕಥೆಗಾರನಾದೆ. ಆದರೆ ಕತೆಗಳಲ್ಲೂ, ಕಾದಂರಿಯಲ್ಲೂ ಕವಿತೆಯನ್ನೇ ಬರೆದೆ. ನನ್ನ ಚಿಂತನೆಗಳೊ, ಶಾಸ್ತ್ರದ ಶಿಸ್ತಿನವನz್ದಲ್ಲ, ಕಾವ್ಯಕ್ಕೆ ಒಲಿದ ಮನಸ್ಸಿನವನದು. ಇದು ಹೆಚ್ಚುಗಾರಿಕೆಯ ಮಾತೂ ಅಲ್ಲ-ಅದು ನಾನಿರುವ ಅವಸ್ಥೆಯೆಂದು ನನ್ನ ಓದುಗರಿಗೆ ನಿವೇದಿಸುತ್ತಿದ್ದೇನೆ. ಹೀಗೆ ಕಾವ್ಯ ನನ್ನ ಭಾವವನ್ನೂ ವಿಚಾರವನ್ನೂ ಸದಾ ನಿರ್ದೇಶಿಸುತ್ತಿದ್ದು ತನ್ನ ಶುದ್ಧ ಸ್ವರೂಪದಲ್ಲಿ ನನ್ನಿಂದ ಆಗಾಗ ಬರೆಸಿಕೊಳ್ಳುವುದಿದೆ.” ಎಂದು ಅನಂತಮೂರ್ತಿಯವರು ಅಜ್ಜನ ಹೆಗಲ ಸುಕ್ಕುಗಳು ಸಂಕಲನದ ಮೊದಲ ಮಾತಿನಲ್ಲಿ ಬರೆದಿದ್ದಾರೆ. 
	
ಅನಂತಮೂರ್ತಿಯವರು ಭಾಷಾಂತರಿಸಿರುವ ಲಾವ್‍ತ್ಸುನ ದಾವ್‍ದ ಜಿಂಗ್ (ಪಥಧರ್ಮ ಸೂತ್ರ) 1994ರಲ್ಲಿ  ಪ್ರಕಟವಾಗಿದೆ. ಲಿನ್‍ಯುಟಾಂಗ್ ಹಾಗೂ ಮಿಚಿಲರ್ ಇಂಗ್ಲೀಷ್ ಭಾಷಾಂತರಗಳ ಆಧಾರದಿಂದ ಅನಂತಮೂರ್ತಿಯವರು ಕನ್ನಡಕ್ಕೆ ತಂದಿರುವ ಪಥಧರ್ಮ ಸೂತ್ರಗಳು ಕಲ್ಪನೊಕ್ತಿಯ ಸೊಗಸಿನಿಂದ ತುಂಬಿವೆ. 
	
1968ರಲ್ಲಿ ಪ್ರಕಟವಾದ ಅನಂತಮೂರ್ತಿಯವರ ಸಾಮಾಜಿಕ ನಾಟಕ ಆವಾಹನೆಯಲ್ಲಿ ಅಸ್ತಿತ್ವವಾದದ ಛಾಯೆ ಇದೆ. ಪ್ರಜ್ಞೆ ಮತ್ತು ಪರಿಸರ (1970), ಸನ್ನಿವೇಶ (1974), ಸಮಕ್ಷಮ (1980), ಪೂರ್ವಾಪರ (1990), ಸಂಸ್ಕøತಿ ಮತ್ತು ಅಡಿಗ (1996), ಬತ್ತಲೆ ಪೂಜೆ ಯಾಕೆ ಕೂಡದು? (1996), ನವ್ಯಾಲೋಕ (1997)-ಇವು ಅನಂತಮೂರ್ತಿಯವರ ವಿಮರ್ಶಾ ಲೇಖನಗಳ ಸಂಕಲನಗಳು. ಡಾ. ಬಿ ದಾಮೋದರ ರಾಯರ ಅಭಿಪ್ರಾಯದಲ್ಲಿ ಭೂಮಿಗೀತದ ಮುನ್ನುಡಿ ಅನಂತಮೂರ್ತಿ ವಾಙ್ಮಯದಲ್ಲೇ ಶ್ರೇಷ್ಠವಾದ ಬರವಣಿಗೆ”. ಮೇಲ್ಮಟ್ಟದ ಸಾಹಿತ್ಯ ವಿಮರ್ಶೆಗೆ ಬೇಕಾದ ನೈತಿಕ ಸ್ಥೈರ್ಯಯಿಂದ ಹೊರಡುವ ಅನಂತಮೂರ್ತಿಯವರು ಸಮಕಾಲೀನ ಲೇಖಕರ ಸ್ಥಾನ ನಿರ್ದೇಶನದ ಅಪ್ರಿಯ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಒಂದು ಕೃತಿಯನ್ನು ವಿಮರ್ಶಿಸುವಾಗ ಅದರ ಸಂಕೇತಸೂಚಕ, ಧೈವ್ವರ್ಥಸೂಚಕ, ಸಂಸ್ಕøತಿಸೂಚಕಗಳನ್ನು ಅನಂತಮೂರ್ತಿ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅನಂತಮೂರ್ತಿ ರಾಜಕಾರಣಿಗಳ ಒಡನಾಟದಲ್ಲೇ ಇದ್ದು, ಅವರ ಇತಿಮಿತಿಗಳನ್ನು ಪ್ರಶ್ನಿಸುವ, ಪಂಪವನ್ನು ನೆನಪಿಸುವ ಲೇಕಕ. ಅವರ ವಿಮರ್ಶೆ ನಿರಪೇಕ್ಷವಲ್ಲ. ತನ್ನ ಓದುಗವಲಯವನ್ನು ವಿಸ್ತರಿಸಬಯಸುವ ಕೃತಿಕಾರನ ಒಂದು ಹಂಬ ಇಲ್ಲಿನ ಒಂದು ಪ್ರೇರಣೆ.
	
ವಸಾಹತುಶಾಹಿ ಚರಿತ್ರೆ ಸೃಷ್ಟಿಸಿದ ಕೀಳರಿಮೆಯಿಂದ ಭಾರತೀಯ ಮುಕ್ತನಾಗುವುದು ಹೇಗೆ ಎನ್ನುವ ಪ್ರಶ್ನೆ ಅನಂತಮೂರ್ತಿಯವರನ್ನು ಕಾಡುತ್ತದೆ. ಅನಂತಮೂರ್ತಿಯವರ ಚಿಂತನೆ ಕರ್ನಾಟಕದ ಸಾಂಸ್ಕøತಿಕ ರಂಗದಲ್ಲಿ ಬೀರಿದ ಪ್ರಭಾವವನ್ನು ಅಲ್ಲಗಳೆಯುವುದು ಸುಲಭವಲ್ಲ. ಕೃತಿನಿಷ್ಠವಾಗಿದ್ದ ನನ್ನ ವಿಮರ್ಶೆ, ಸಾಂಸ್ಕøತಿಕ ರಾಜಕೀಯವನ್ನು ಅರ್ಥೈಸಿಕೊಂಡು, ಸಂಸ್ಕøತಿನಿಷ್ಠವಾಗಿ ರೂಪಾಂತರಗೊಂಡಿರುವುದನ್ನು ಅನಂತಮೂರ್ತಿಯವರ ವಿಮರ್ಶಾ ಕೃತಿಗಳು ಸ್ಪಷ್ಟಪಡಿಸುತ್ತವೆ. 
 									
(ಮುರಳೀಧರ್ ಉಪಾಧ್ಯ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ